ದಾಳಿಂಬೆ
ಬಹು ಪ್ರಾಚೀನವಾದ ಹಾಗೂ ಜನಪ್ರಿಯವಾದ ಫಲವೃಕ್ಷಗಳಲ್ಲಿ ಒಂದು (ಪ್ರಾಮ್‍ಗ್ರ್ಯಾನೆಟ್). ಪ್ಯೂನಿಕ್ ಗ್ರ್ಯಾನೇಟಮ್ ಇದರ ವೈಜ್ಞಾನಿಕ ಹೆಸರು. ಇದು ಪ್ಯೂನಿಕೇಸೀ ಕುಟುಂಬಕ್ಕೆ ಸೇರಿದೆ.

ಇದರ ತವರು ಇರಾನ್ ಎಂದು ಹೇಳಲಾಗಿದೆ. ಬ್ಯಾಬಿಲಾನಿನ ತೂಗು ಉದ್ಯಾನಗಳಲ್ಲೂ ಪ್ರಾಚೀನ ಈಜಿಪ್ಟಿನಲ್ಲೂ ಇದರ ಕೃಷಿ ಇತ್ತು. ಬಲು ಹಿಂದೆಯೇ ಮೆಡಿಟರೇನಿಯನ್ ಪ್ರದೇಶ, ಭಾರತ ಮತ್ತು ಚೀನಗಳಿಗೆ ಇದನ್ನು ಕೊಂಡೊಯ್ದು ಬೆಳೆಸಲಾಯಿತೆಂದು ಹೇಳಲಾಗಿದೆ. ಈಗ ಉಷ್ಣ ಹಾಗೂ ಉಪೊಷ್ಣ ವಲಯಗಳ ಬಹುಪಾಲು ದೇಶಗಳಲ್ಲಿ ಇದರ ಬೇಸಾಯ ಉಂಟು. ಹಿಮಾಲಯ ಪರ್ವತಶ್ರೇಣಿಯ ಕೊಳ್ಳಗಳ ಹಾಗೂ ತಪ್ಪಲಿನ ಬಳಿಯ ಬೆಟ್ಟಗಳ 900-1800 ಮೀ. ಎತ್ತರದ ಸೀಮೆಗಳಲ್ಲಿ ಇದು ಕಾಡುಗಿಡವಾಗಿಯೂ ಕಾಣದೊರೆಯುತ್ತದೆ. ಭಾರತದ್ಯಂತ ಇದರ ಕೃಷಿ ಇದೆಯಾದರೂ ವಿಸ್ತೀರ್ಣ ಹೆಚ್ಚಾಗಿಲ್ಲ. ಇದರಲ್ಲಿ ಬಹುಪಾಲು ಇರುವುದು ಮಹಾರಾಷ್ಟ್ರದಲ್ಲಿ. ಆ ರಾಜ್ಯದ ಪುಣೆ, ಸೊಲ್ಲಾಪುರ ಮತ್ತು ಸತಾರ ಜಿಲ್ಲೆಗಳು ದಾಳಿಂಬೆ ಬೇಸಾಯದ ಪ್ರಮುಖ ಪ್ರದೇಶಗಳಾಗಿವೆ. ಗುಜರಾತಿನ ಧೋಲ್ಕ ತಾಲ್ಲೂಕು, ಉತ್ತರ ಪ್ರದೇಶದ ಆಲ್ಮೋರ, ಆಲಿಫರ್, ಮೀರತ್, ಫರೂಕಾಬಾದ್, ತೆಹ್ರಿಗರ್ವಾಲ್ ತಮಿಳುನಾಡಿನ ಉತುಕುಳಿ, ಮೈಕೇಲ್ ಪಟ್ಟಿ, ವೆಲ್ಲೋಡು, ದಿಂಡಿಗಲ್, ಆಂಧ್ರಪ್ರದೇಶದ ಮಡಕಶಿರ, ಪೆನುಗೊಂಡೆ ಹಾಗೂ ಕರ್ನಾಟಕದ ತುಮಕೂರು, ಬೆಂಗಳೂರು, ಕೋಲಾರ ಮತ್ತು ಮೈಸೂರು ಜಿಲ್ಲೆಗಳಲ್ಲಿ ದಾಳಿಂಬೆಯನ್ನು ಗಣನೀಯ ಪರಿಮಾಣದಲ್ಲಿ ಬೆಳೆಸಲಾಗುತ್ತಿದೆ.

ಸಸ್ಯವಿವರಣೆ : ದಾಳಿಂಬೆ 5-10 ಮೀ. ಎತ್ತರಕ್ಕೆ ಬೆಳೆಯುವ ಚಿಕ್ಕ ಗಾತ್ರದ ಮರ. ಇಲ್ಲವೆ ಪೊದೆ ಸಸ್ಯ. ಚಳಿಗಾಲ ತೀವ್ರವಾಗಿರುವಂಥ ಪ್ರದೇಶಗಳಲ್ಲಿ ಇದು ಪರ್ಣಪಾತಿ ಬಗೆಯ ಗಿಡವಾಗಿದೆಯಾದರೂ ಉಳಿದೆಡೆಗಳಲ್ಲಿ ನಿತ್ಯ ಹಸಿರು ಬಗೆಯ ಗಿಡವಾಗಿದೆ. ಇದರ ತೊಗಟೆ ನಯ ಹಾಗೂ ಕಪ್ಪು ಮಿಶ್ರಿತ ಬೂದಿ ಬಣ್ಣದ್ದು. ಕಿರು ರೆಂಬೆಗಳ ಮೇಲೆ ಮುಳ್ಳುಗಳಿರುವುದುಂಟು. ಎಲೆಗಳು ಸರಳ ರೀತಿಯವು; ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಇವುಗಳ ಉದ್ದ 2-8 ಸೆಂ.ಮೀ, ಆಕಾರ ಉದ್ದನೆಯ ಅಂಡದಂತೆ, ಮೇಲ್ಭಾಗ ಫಳಫಳನೆ ಹೊಳೆಯುತ್ತವೆ. ಹೂಗಳು ಒಂಟೊಂಟಿಯಾಗಿ ಇಲ್ಲವೆ 2-4ರ ಗುಂಪುಗಳಲ್ಲಿ ಇವೆ. ಇವುಗಳಲ್ಲಿ ಬಣ್ಣ ಕೆಂಪು ಹಳದಿ, ಇಲ್ಲವೆ ಕಿತ್ತಳೆ ಮಿಶ್ರಿತ ಕೆಂಪು. ಒಂದೊಂದರಲ್ಲೂ 5-7 ಪುಷ್ಪಪತ್ರಗಳು. 5-7 ದಳಗಳು. ಹಲವಾರು ಕೇಸರಗಳು ಮತ್ತು 3-7 ಕಾರ್ಪೆಲುಗಳಿಂದ ಕೂಡಿದ ನೀಚಸ್ಥಾನದ ಅಂಡಾಶಯ ಉಂಟು. ಫಲ ಬೆರಿ ಮಾದರಿಯದು. ಕಂದುಮಿಶ್ರಿತ ಹಳದಿ ಅಥವಾ ಕೆಂಪು ಬಣ್ಣದ ಇದಕ್ಕೆ ಚರ್ಮಿಲವಾದ ಸಿಪ್ಪೆಯೂ ಗುಂಡನೆಯ ಆಕಾರವೂ ಉಂಟು. ಹಣ್ಣಿನ ಗಾತ್ರ ಸುಮಾರು 5-12 ಸೆಂ. ಮೀ. ಹಣ್ಣಿನ ಒಳಭಾಗ ತೆಳುವಾದ ಪಟಲಗಳಿಂದಾಗಿ ಅನೇಕ ಕೋಣೆಗಳಾಗಿ ವಿಭಾಗಿತವಾಗಿವೆ. ಬೀಜಗಳು ಅಸಂಖ್ಯ. ಒಂದೊಂದು ಬೀಜದ ಸುತ್ತ ರಸಭರಿತ ಏರಿಲ್ ಎಂಬ ಹೊದಿಕೆಯುಂಟು. ಇದೇ ನಾವು ತಿನ್ನುವಂಥ ಭಾಗ. ಇದರ ಬಣ್ಣ ಕೆಂಪು. ನಸುಗೆಂಪು ಅಥವಾ ಬಿಳಿ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ದಾಳೆಂಬೆಯ ಬಗೆಗಳು : ಭಾರತದಲ್ಲಿ ಬೆಳೆಸುವ ದಾಳಿಂಬೆಯಲ್ಲಿ ಹಲವಾರು ಬಗೆಗಳು ಉಂಟು. ಇವುಗಳ ಹಣ್ಣಿನ ಆಕಾರ, ಸಿಪ್ಪೆಯ ಬಣ್ಣ ಹಾಗೂ ದಪ್ಪ, ಬೀಜಗಳ ಬಣ್ಣ ಮತ್ತು ರುಚಿಯಲ್ಲಿ ವ್ಯತ್ಯಾಸ ಇದೆ. ಕೆಲವು ಬಗೆಗಳಲ್ಲಿ ಗಟ್ಟಿ ಬೀಜಗಳಿವೆಯಾದರೆ ಇನ್ನು ಕೆಲವಲ್ಲಿ ತುಂಬ ಮೆದುವಾದ ಬೀಜಗಳುಂಟು. ಇಂಥ ಮೆದುಬೀಜದ ಬಗೆಗಳನ್ನು ಬೀಜರಹಿತ ಬಗೆಗಳು ಎಂದು ಕರೆಯಲಾಗುತ್ತದೆ. ಭಾರತದ ಮುಖ್ಯ ಬಗೆಗಳನ್ನು ಕೆಳಗಿನ ಪಟ್ಟಿಯಲ್ಲಿ ಕೊಡಲಾಗಿದೆ. 

ಬಗೆ
ಹಣ್ಣಿನ ಗುಣಲಕ್ಷಣಗಳು

ಆಳಂದಿ ಅಥವಾ ವಾಡ್ಕಿ
ಹಣ್ಣು ಮಧ್ಯಮ ಗಾತ್ರದ್ದು. ಬೀಜಗಳ ಹೊರ ತಿರುಳಿನ ಬಣ್ಣ ರಕ್ತಗೆಂಪು ಇಲ್ಲವೇ ಗಾಢ ನಸುಗೆಂಪು. ಬೀಜಗಳು ಬಲು ಗಟ್ಟಿ. ರಸ ಸಿಹಿ.

ಬೇದಾನ
ಹಣ್ಣು ಮಧ್ಯಮ ಇಲ್ಲವೇ ದೊಡ್ಡ ಗಾತ್ರದ್ದು; ಸಿಪ್ಪೆಯ ಬಣ್ಣ ಕಂದು ಇಲ್ಲವೇ ಬಿಳಿ; ಬೀಜಗಳ ಹೊರತಿರುಳು ಬಿಳಿ ಮಿಶ್ರಿತ ನಸುಗೆಂಪು. ರಸ ಸಿಹಿ. ಬೀಜಗಳು ಮೆತು.

ಧೋಲ್ಕ
ಹಣ್ಣು ದೊಡ್ಡ ಗಾತ್ರದ್ದು; ಸಿಪ್ಪೆ ಹಸಿರು ಮಿಶ್ರಿತ ಬಿಳಿ ಬೀಜಗಳ ಹೊರತಿರುಳಿನ ಬಣ್ಣ ನಸುಗೆಂಪು ಮಿಶ್ರಿತ ಬಿಳಿ ಇಲ್ಲವೇ ಬಿಳಿ; ಬೀಜಗಳು ಮೆತು; ರಸ ಸಿಹಿ.

ಕಾಬೂಲ್ 
ಹಣ್ಣು ದೊಡ್ಡ ಗಾತ್ರದ್ದು; ಸಿಪ್ಪೆ ಮಂದವಾಗಿದೆ; ಇದರ ಬಣ್ಣ ಕಡುಗೆಂಪು; ಬೀಜದ ಹೊರತಿರುಳು ಕಡುಗೆಂಪು ಬಣ್ಣದ್ದು; ರಸ ಕೊಂಚ ಕಹಿ.

ಕಾಂದಹಾರಿ
ಹಣ್ಣು ದೊಡ್ಡ ಗಾತ್ರದ್ದು; ಸಿಪ್ಪೆಯ ಬಣ್ಣ ಕಡುಗೆಂಪು; ಬೀಜಗಳು ಗಟ್ಟಿ; ಹೊರತಿರುಳಿನ ಬಣ್ಣ ರಕ್ತಗೆಂಪು ಇಲ್ಲವೇ ನಸುಗೆಂಪು; ರಸ ಸ್ವಲ್ಪ ಹುಳಿ ಮಿಶ್ರಿತ ಸಿಹಿ.

ಮಸ್ಕೆಟ್ ರೆಡ್
ಹಣ್ಣು ಚಿಕ್ಕ ಇಲ್ಲವೇ ಮಧ್ಯಮ ಗಾತ್ರದ್ದು; ಸಿಪ್ಪೆ ಕೊಂಚ ಮಂದವಾಗಿದೆ; ರಸ ಸಾಧಾರಣ ಸಿಹಿ; ಬೀಜಗಳು ಹೆಚ್ಚು ಗಟ್ಟಿಯಾಗಿಲ್ಲ.

ಪೇಪರ್ ಶೆಲ್
ಹಣ್ಣು ಮಧ್ಯಮ ಗಾತ್ರದ್ದು; ಸಿಪ್ಪೆ ಮಂದ; ಬೀಜಗಳ ಹೊರತಿರುಳು ಕೆಂಪು ಇಲ್ಲವೇ ನಸುಗೆಂಪು; ಬೀಜಗಳು ಮೆತು; ರಸ ಸಿಹಿ.

ಪೂನ
ಹಣ್ಣು ದೊಡ್ಡ ಗಾತ್ರದ್ದು; ಸಿಪ್ಪೆ ಊದಾಕೆಂಪು; ಬೂದಿ ಮಿಶ್ರಿತ ಹಸಿರು ಅಥವಾ ದಟ್ಟಬೂದಿ ಬಣ್ಣದ್ದು; ಕೆಲವೊಮ್ಮೆ ಚುಕ್ಕೆಗಳಿರುವುದುಂಟು. ಬೀಜದ ಹೊರತಿರುಳು ಅಚ್ಚಕೆಂಪು ಇಲ್ಲವೇ ನಸುಗೆಂಪು.

ಸ್ಪ್ಯಾನಿಷ್ ರೂಬಿ
ಹಣ್ಣು ಚಿಕ್ಕ ಅಥವಾ ಮಧ್ಯಮ ಗಾತ್ರದ್ದು; ಸಿಪ್ಪೆ ತೆಳುವಾಗಿದೆ. ಬೀಜದ ಹೊರತಿರುಳು ಗುಲಾಬಿ ಬಣ್ಣದ್ದು; ಬೀಜಗಳು ಮೆತು.

ವೆಲ್ಲೋಡು
ಹಣ್ಣು ಮಧ್ಯಮ ಗಾತ್ರದ್ದು; ಸಿಪ್ಪೆ ಸುಮಾರಾಗಿ ಮಂದವಾಗಿದೆ; ಬೀಜಗಳು ಹೆಚ್ಚು ಗಟ್ಟಿಯಾಗಿಲ್ಲ.

ಕರ್ನಾಟಕದಲ್ಲಿ ಹೆಸರುವಾಸಿಯಾಗಿರುವ ಬಗೆಗಳೆಂದರೆ ಚಿಂತಾಮಣಿ, ಮಧುಗಿರಿ ಮತ್ತು ಜರಗಿನಹಳ್ಳಿ.
ದಾಳಿಂಬೆಯಲ್ಲಿ ತೋಟಗಾರಿಕೆಯ ದೃಷ್ಟಿಯಿಂದ ಪ್ರಮುಖವಾಗಿರುವ ಹಲವಾರು ಬಗೆಗಳೂ ಉಂಟು. ಇವುಗಳ ಹಣ್ಣು ರುಚಿಕರವಾಗಿರುವುದಿಲ್ಲ. ಆದರೆ ಹೂಗಳು ಎರಡು ಸುತ್ತಿನ ದಳಗಳುಳ್ಳವು.

ದಾಳಿಂಬೆಯನ್ನು ಎಲ್ಲ ವಿಧವಾದ ಭೂಮಿಯಲ್ಲೂ ಹವೆಯಲ್ಲೂ ಬೆಳೆಸಬಹುದು. ಸಮುದ್ರಮಟ್ಟದಿಂದ 1500 ಮೀ. ಎತ್ತರದ ಪ್ರದೇಶಗಳಲ್ಲಿ ದಾಳಿಂಬೆ ಬೆಳೆಯುತ್ತದಾದರೂ ಬೇಸಿಗೆಯಲ್ಲಿ ಶುಷ್ಕತೆ ಮತ್ತು ಉಷ್ಣತೆ ಹೆಚ್ಚಾಗಿರುವ ಮತ್ತು ಚಳಿಗಾಲದಲ್ಲಿ ಹೆಚ್ಚು ಚಳಿ ಇರುವ ಕಡೆ ಇದು ಚೆನ್ನಾಗಿ ಬೆಳೆಯುತ್ತದೆ. ದಾಳಿಂಬೆ ವಿಪರೀತ ಚಳಿಯನ್ನು ಮತ್ತು ಉಷ್ಣತೆಯನ್ನು ಸಹಿಸಿಕೊಳ್ಳಬಲ್ಲದು. ಚಳಿಗಾಲದಲ್ಲಿ ಚಳಿ ವಿಪರೀತವಾದಾಗ ಗಿಡಗಳ ಎಲೆಯುದುರಿ ಬೋಳಾಗುತ್ತದೆ. ಬೇಸಿಗೆ ಬಂದೊಡನೆ ಹೊಸ ಚಿಗುರು ಹೊಮ್ಮಿ ಗಿಡಗಳು ಹುಲುಸಾಗಿ ಬೆಳೆಯಲಾರಂಭಿಸುತ್ತವೆ. ಒಂದು ಮುಖ್ಯ ವಿಷಯವೆಂದರೆ ಹಣ್ಣು ಬಿಡುವ ಕಾಲದಲ್ಲಿ ಉಷ್ಣತೆ ಹೆಚ್ಚಾಗಿ ಇರಬೇಕು. ಉಷ್ಣತೆ 1000 ಈ ಗಿಂತ ಹೆಚ್ಚಾಗಿಲ್ಲದಿದ್ದರೆ ಹಣ್ಣುಗಳು ಸಪ್ಪೆ. ಒಗಚು ಇಲ್ಲವೇ ಹುಳಿಯಾಗುತ್ತವೆ. ದಾಳಿಂಬೆಗೆ ಹೆಚ್ಚು ಮಳೆ ಅನಾವಶ್ಯಕ; ಮಳೆ ಇಲ್ಲದಿದ್ದರೂ ಆದೀತು. ತೇವಪೂರಿತ ವಾತಾವರಣ ದಾಳಿಂಬೆಗೆ ಹಿತಕರವಲ್ಲ. ಶುಷ್ಕವಾದ ಹವೆಯನ್ನು ನೀರಾವರಿ ಸೌಕರ್ಯವಿದ್ದರೆ ದಾಳಿಂಬೆ ಚೆನ್ನಾಗಿ ಬೆಳೆದು ಒಳ್ಳೆಯ ಫಸಲನ್ನು ಕೊಡುತ್ತದೆ.

ದಾಳಿಂಬೆಯನ್ನು ಎಲ್ಲ ವಿಧವಾದ ಭೂಮಿಯಲ್ಲಿ ಬೆಳೆಸಬಹುದಾದರೂ ಇತರ ಹಣ್ಣುಗಳನ್ನು ಬೆಳೆಸಲು ಸಾಧ್ಯವಿಲ್ಲದ ಕಡೆ ಇದನ್ನು ಬೆಳೆಸುವುದೇ ಹೆಚ್ಚು. ಇದಕ್ಕೆ ಅನೇಕ ಕಾರಣಗಳಿವೆ; ದಾಳಿಂಬೆ ಕೀಟಗಳ ತೊಂದರೆ ಹೆಚ್ಚಾಗಿರುವುದರಿಂದ ಇದನ್ನು ಇತರ ಕಡೆ ಬೆಳೆಸಲು ತೋಟಗಾರರು ಹೆಚ್ಚಾಗಿ ಇಷ್ಟಪಡುವುದಿಲ್ಲ. ಇದನ್ನು ಬೆಟ್ಟದ ಅಡಿಯಲ್ಲಿ ಇಲ್ಲವೆ ಬೆಟ್ಟದ ಮೇಲೆ ಸ್ವಲ್ಪ ತೇವವಿರುವ ಕಡೆಗಳಲ್ಲಿ ಬೆಳೆಸಲಾಗುತ್ತದೆ. ಭೂಮಿಯಲ್ಲಿ ಸುಣ್ಣದ ಅಂಶ ಮತ್ತು ಕ್ಷಾರ ಸ್ವಲ್ಪ ಹೆಚ್ಚಾಗಿದ್ದರೂ ದಾಳಿಂಬೆಗೆ ಆಳವಾದ ಮೆಕ್ಕಲುಮಣ್ಣು ಇರುವ ಭೂಮಿ ಅತ್ಯುತ್ತಮವಾದುದೆಂದು ಹೇಳಲಾಗಿದೆ.

ಬೆಳೆಸುವ ವಿಧಾನ: ದಾಳಿಂಬೆಯನ್ನು ಸಾಮಾನ್ಯವಾಗಿ ಬೀಜದಿಂದಲೇ ಬೆಳೆಸುತ್ತಾರೆ. ಚೆನ್ನಾಗಿ ಅಗೆದು ಹೆಂಟಿ ಒಡೆದು ಮಟ್ಟಮಾಡಿ ಗೊಬ್ಬರ ಹಾಕಿ ನೆಲಮಟ್ಟದಿಂದ 6 ಸೆಂಮೀ. ಎತ್ತರಕ್ಕೆ ಮಣ್ಣನ್ನು ಏರಿಸಿ ಮಾಡಿದ ಮಡಿಗಳಲ್ಲಿ ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ಬೀಜಗಳನ್ನು ಬಿತ್ತಲಾಗುತ್ತದೆ. ಇವು ಸುಮಾರು 10 ದಿವಸಗಳಲ್ಲಿ ಮೊಳೆಯುತ್ತವೆ. ಒಂದು ವರ್ಷದ ಅನಂತರ ಸಸಿಗಳನ್ನು ನಾಟಿಮಾಡಲಾಗುತ್ತದೆ. ಬೀಜದಿಂದ ಬೆಳೆದ ಸಸಿಗಳು ಒಂದೇ ಸಮವಾಗಿರುವುದಿಲ್ಲವಾದ್ದರಿಂದ ಉತ್ತಮ ಬಗೆಯ ಗಿಡಗಳಿಂದ ಕಡ್ಡಿಗಳನ್ನು ಕತ್ತರಿಸಿ, ಅವುಗಳನ್ನು ಒಟ್ಲುಪಾತಿಗಳಲ್ಲಿ 30-45 ಸೆಂ.ಮೀ. ಅಂತರವಿರುವಂತೆ ನೆಡಲಾಗುವುದು. ಅವು ಚೆನ್ನಾಗಿ ಬೆಳೆದು ಬೇರೂರಿ 45 ಸೆಂ.ಮೀ. ಎತ್ತರಕ್ಕೆ ಬೆಳೆದ ಮೇಲೆ ಬೇರೆಡೆಗೆ ನಾಟಿ ಮಾಡಲಾಗುತ್ತದೆ. ಕಡ್ಡಿ ನೆಟ್ಟು ಪಡೆದ ಗಿಡಗಳಿಗೆ ತಾಯಿಗಿಡದ ಗುಣಗಳೇ ಉಂಟು. ಕಡ್ಡಿಗಳನ್ನು ನೆಡುವುದು ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳುಗಳಲ್ಲಿ. 10-12 ತಿಂಗಳ ತರುವಾಯ ತೋಟಗಳಲ್ಲಿ ನೆಡುತ್ತಾರೆ. ಒಳ್ಳೆ ಜಾತಿಗಳ ಗಿಡಗಳನ್ನು ಲೇಯರ್ ಇಲ್ಲವೇ ಗೂಟಿ ಮಾಡಿ ವೃದ್ಧಿಸುವುದೂ ಉಂಟು.

ದಾಳಿಂಬೆ ತೋಟಕ್ಕಾಗಿ ಮೀಸಲಾಗಿಟ್ಟ ಭೂಮಿಯನ್ನು ಮಳೆಗಾಲದ ಮುಂಚೆಯೇ ಅಗೆದು, ಹದಗೊಳಿಸಿ, ಗುಣಿಗಳನ್ನು ಸಿದ್ಧಪಡಿಸಿಕೊಳ್ಳಲಾಗುತ್ತದೆ. ಗುಣಿಗಳನ್ನು ಭೂಮಿಗೆ ಅನುಸಾರವಾಗಿ 3-6 ಮೀ. ಅಂತರದಲ್ಲಿ ತೆಗೆಯಲಾಗುತ್ತದೆ. ಗುಣಿಗಳಲ್ಲಿ ಸಸಿಗಳನ್ನು ನೆಡುವುದಕ್ಕೆ ಎರಡು ವಾರ ಮುಂಚೆ ಮೇಲ್ಮಣ್ಣು, ಕೆಮ್ಮಣ್ಣು, ಗೋಡು ಮತ್ತು ಕಾಂಪೋಸ್ಟ್ ಗೊಬ್ಬರ ಮುಂತಾದವುಗಳನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಮಾಡಿ ಗಣಿಗಳನ್ನು ತುಂಬಲಾಗುತ್ತದೆ. ಸಸಿಗಳು ಸುಮಾರು 15 ದಿವಸಗಳಲ್ಲಿ ಬೇರುಬಿಟ್ಟು ಹೊಸ ಚಿಗುರುಗಳು ಕಾಣಿಸಿಕೊಳ್ಳುತ್ತವೆ. ಗಿಡಗಳ ಮಧ್ಯೆ ಇರುವ ಖಾಲಿ ಜಾಗವನ್ನು ಎರಡು-ಮೂರು ವರ್ಷಗಳ ಕಾಲ ಚೆನ್ನಾಗಿ ಉತ್ತು, ಕುಂಟೆ ಹೊಡೆದು ಕೂಳೆಗಳನ್ನು ತೆಗೆದು ಹಾಕಿ ಹುರುಳಿ ಮುಂತಾದ ಅಲ್ಪಾವಧಿ ದ್ವಿದಳ ಧಾನ್ಯದ ಬೆಳೆಗಳನ್ನು ಬೆಳೆಸುವ ಕ್ರಮ ಉಂಟು. ಆಮೇಲೆ ದಾಳಿಂಬೆ ಭೂಮಿಯನ್ನೆಲ್ಲ ಆವರಿಸುವುದರಿಂದ ಗಿಡಗಳ ಮಧ್ಯೆ ಇರುವ ಭಾಗವನ್ನು ಅಗೆದು ಬೀಡು ಬಿಡುತ್ತಾರೆ. 

ಮೂರು ವರ್ಷಗಳವರೆಗೆ ಗಿಡ ಒಂದಕ್ಕೆ ವರ್ಷಕ್ಕೊಮ್ಮೆ 20-60 ಕೆ.ಜಿ. ಕೊಟ್ಟಿಗೆ ಗೊಬ್ಬರವನ್ನು ಇಲ್ಲವೆ ಕಾಂಪೋಸ್ಟ್ ಗೊಬ್ಬರವನ್ನು ಹಾಕಲಾಗುತ್ತದೆ. ಆಮೇಲೆ ಗಿಡಗಳು ಬೆಳೆದು ಫಸಲು ಕೊಡಲಾರಂಭಿಸಿದಾಗ ವರ್ಷಕ್ಕೆ ಸುಮಾರು 60 ಕೆಜಿ. ಗೊಬ್ಬರ ಹಾಕಲಾಗುವುದು. ಇದರ ಜೊತೆಗೆ ಎಳೆ ಗಿಡಗಳಿಗೆ 0.5-1.5 ಕೆಜಿ. ನೆಲಗಡಲೆ ಹಿಂಡಿಯನ್ನೂ 3-4 ಕೆಜಿ. ಅಮೋನಿಯಮ್ ಸಲ್ಫೇಟನ್ನೂ ಬಲಿತ ಗಿಡಗಳಿಗೆ2.5-4 ಕೆಜಿ. ನೆಲಗಡಲೆ ಹಿಂಡಿಯನ್ನೂ 1.5 ಕೆಜಿ. ಅಮೋನಿಯಮ್ ಸಲ್ಫೇಟನ್ನೂ ಹಾಕಲಾಗುತ್ತದೆ. ಗಿಡಗಳಿಗೆ ಆಗಿಂದಾಗ ನೀರುಕಟ್ಟಿ ಭೂಮಿಯ ತೇವ ಒಂದೇ ಮಟ್ಟಕ್ಕೆ ಇರುವಂತೆ ನೋಡಿಕೊಳ್ಳಲಾಗುತ್ತದೆ. ಇದರಿಂದ ಗಿಡಗಳು ಚೆನ್ನಾಗಿ ಬೆಳೆದು ಒಳ್ಳೆ ಫಲ ಕೊಡುವುವು, ಅಲ್ಲದೆ ಹಣ್ಣುಗಳು ಬಿರುಕು ಬಿಡುವುದಿಲ್ಲ.

ದಾಳಿಂಬೆ ಗಿಡಗಳು ಚಿಕ್ಕವಾಗಿದ್ದಾಗ ಅನೇಕ ಮೂಲಕಾಂಡಗಳು ನೆಲಮಟ್ಟದಿಂದ ಬೆಳೆದ ಮೇಲೆ ಅವುಗಳಲ್ಲಿ 3-4 ಕಾಂಡಗಳನ್ನು ಮಾತ್ರ ಬಿಟ್ಟು ಉಳಿದವನ್ನು ಕತ್ತರಿಸಲಾಗುತ್ತದೆ. ಅನೇಕ ವೇಳೆ ಒಂದೇ ಒಂದು ಮೂಲಕಾಂಡವನ್ನು ಬಿಟ್ಟುಕೊಂಡು ಉಳಿದವನ್ನೆಲ್ಲ ತೆಗೆದುಹಾಕುವ ಕ್ರಮವೂ ಉಂಟು. ಮೂಲಕಾಂಡಗಳನ್ನು ತೆಗೆದುಹಾಕಿದಂತೆಲ್ಲ ಹುಟ್ಟುವ ಹೊಸ ಚಿಗುರುಗಳನ್ನು ಕತ್ತರಿಸಿ ಹಾಕಲಾಗುವುದು.

ದಾಳಿಂಬೆ ಗಿಡದಲ್ಲಿ ಸಾಮಾನ್ಯವಾಗಿ ಚಳಿಗಾಲದ ಮೂರು-ನಾಲ್ಕು ತಿಂಗಳ ಹೊರತು ಉಳಿದ ಎಲ್ಲ ತಿಂಗಳುಗಳಲ್ಲೂ ಹೂ ಅರಳುತ್ತದೆ. ಕೆಲವು ಕಡೆ ವರ್ಷವೆಲ್ಲ ಹೂ ಬಿಡುವುದನ್ನು ಕಾಣಬಹುದು. ಆದರೆ ಹೀಗೆ ವರ್ಷವೆಲ್ಲ ಹೂ ಮತ್ತು ಕಾಯಿ ಬಿಡುವುದು ಗಿಡಗಳ ಮತ್ತು ತೋಟಗಳ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಹೇಳಲಾಗಿದೆ. ಇದರಿಂದ ಹೂ ಬಿಡುವುದನ್ನು ಕೆಲವು ನಿರ್ದಿಷ್ಟ ಶ್ರಾಯಗಳಿಗೆ ನಿಯಂತ್ರಿಸಲಾಗಿದೆ. ಭಾರತದಲ್ಲಿ ದಾಳಿಂಬೆ ಹೂ ಬಿಡುವುದನ್ನು ಮಾರ್ಚ್-ಏಪ್ರಿಲ್ (ಅಂಬೇ ಬಹಾರ್) ಜೂನ್-ಜುಲೈ (ಮೃಗ ಬಹಾರ್) ಮತ್ತು ಸೆಪ್ಟೆಂಬರ್ -ಅಕ್ಟೋಬರ್ (ಹತ್ತ ಬಹಾರ್) ತಿಂಗಳುಗಳಿಗೆ ಮಿತಗೊಳಿಸಬೇಕೆಂದು ಅಭಿಪ್ರಾಯ ಪಡುತ್ತಾರೆ. ಹೂ ಬಿಟ್ಟ 6-7 ತಿಂಗಳ ಅನಂತರ ಹಣ್ಣುಗಳು ಕೊಯಿಲಿಗೆ ಸಿದ್ಧವಾಗುವುವು. ಅಂಬೇ ಬಹಾರಿನ ಹಣ್ಣುಗಳು ಉಳಿದ ಶ್ರಾಯಗಳ ಹಣ್ಣುಗಳಿಗಿಂತ ಉತ್ತಮ ಬಗೆಯವು ಎನಿಸಿವೆ. ಈ ಹಣ್ಣುಗಳು ದೊಡ್ಡ ಗಾತ್ರವಾಗಿದ್ದು ರಸಭರಿತವಾಗಿ ರುಚಿಯಾಗಿರುತ್ತವೆ. ಮತ್ತು ಅವು ಬಿರುಕು ಬಿಡುವುದಿಲ್ಲ. ಗಿಡಗಳನ್ನು ನೆಟ್ಟ ನಾಲ್ಕನೆಯ ವರ್ಷದ ವೇಳೆಗೆ ಅವು ಫಲ ಕೊಡಲಾರಂಭಿಸುತ್ತವೆ. ಪ್ರಥಮದಲ್ಲಿ ಗಿಡ ಒಂದಕ್ಕೆ 20-25 ಹಣ್ಣು ಸಿಗಬಹುದು. ಈ ಸಂಖ್ಯೆಯ ವರ್ಷ ವರ್ಷಕ್ಕೂ ಹೆಚ್ಚುತ್ತ ಹೋಗಿ 10ನೆಯ ವರ್ಷದ ವೇಳೆಗೆ 150ಕ್ಕೆ ಏರುತ್ತದೆ. ಒಳ್ಳೆಯ ಗಿಡಗಳಲ್ಲಿ ಈ ಸಂಖ್ಯೆ 250 ರಷ್ಟು ಹೆಚ್ಚಾಗಿರಬಹುದು. ಗಿಡಗಳು 25-30 ವರ್ಷಗಳ ಕಾಲ ಒಳ್ಳೆಯ ಫಸಲನ್ನು ಕೊಡುತ್ತವೆ.

ದಾಳಿಂಬೆ ಹಣ್ಣಿನ ಸಿಪ್ಪೆ ಮಂದವಾಗಿರುವುದರಿಂದ ಹಣ್ಣು ಅನೇಕ ತಿಂಗಳುಗಳ ಕಾಲ ಕೆಡದೆ ಇರುತ್ತದೆ. ಆದ್ದರಿಂದ ದಾಳಿಂಬೆ ಹಣ್ಣುಗಳನ್ನು ಸಂಗ್ರಹಿಸಿಡಲು ವಿಶೇಷ ಶ್ರಮವೇನೂ ಬೇಕಿಲ್ಲ. ಬಿದಿರಿನ ಬುಟ್ಟಿಗಳಲ್ಲಿ ಹಾಕಿ ಹಣ್ಣುಗಳನ್ನು ಸಂಗ್ರಹಿಸಿಡಬಹುದು.
ಅನೇಕ ತೋಟಗಳಲ್ಲಿ ಹಣ್ಣುಗಳು ಬಿರುಕು ಬಿಟ್ಟು ನಾಶವಾಗುವುದನ್ನು ಕಾಣಬಹುದು . ಇದಕ್ಕೆ ಅನೇಕ ಕಾರಣಗಳಿವೆ: 1. ತೋಟದ ನಿರ್ವಹಣೆ ಸರಿಯಾಗಿಲ್ಲದಿರುವುದು. 2 ಮಳೆ ಬೀಳುವುದರಲ್ಲಿ ವಿಶೇಷ ವ್ಯತ್ಯಾಸ, 3 ಭೂಮಿಯ ತೇವದಲ್ಲಿ ಆಗಿಂದಾಗ ಆಗುವ ವ್ಯತ್ಯಾಸ, 4 ನೀರು ಕಟ್ಟುವುದರಲ್ಲಿ ವ್ಯತ್ಯಾಸ, 5 ದಾಳಿಂಬೆ ಇನ್ನೂ ಸಣ್ಣ ಕಾಯಿಯಾಗಿದ್ದಾಗ ಸಾಕಷ್ಟು ಬೋರಾನ್ ಅಂಶ ಸಿಕ್ಕದಿರುವುದು. 6 ಕಾಯಿಗಳಲ್ಲಿ ಹುಳುಗಳು ಹೆಚ್ಚಾಗಿರುವುದು ಬಿರಿದ ಕಾಯಿಗಳು ಸರಿಯಾಗಿ ಹಣ್ಣಾಗುವುದಿಲ್ಲ ಮತ್ತು ಅವನ್ನು ಹೆಚ್ಚುಕಾಲ ಇಡಲೂ ಆಗುವುದಿಲ್ಲ.

ಚೆನ್ನಾಗಿ ಪಕ್ವವಾದ ಹಣ್ಣುಗಳ ಬಣ್ಣ ಕಂದು, ಕೆಂಪು ಇಲ್ಲವೇ ಕಂದುಮಿಶ್ರ ಕೆಂಪು. ಒಳಗೆ ಕಾಳುಗಳು ದಟ್ಟವಾದ ಕೆಂಪು, ತಿಳಿಗೆಂಪು ಇಲ್ಲವೇ ಬಿಳಿಕೆಂಪು ಬಣ್ಣಕ್ಕಿರುತ್ತದೆ. ಕೆಂಪು ಬಣ್ಣದ ಬೀಜಗಳಿರುವ ದಾಳಿಂಬೆ ತಿನ್ನಲು ಅತ್ಯುತ್ತಮವಾದುದು ಎನ್ನಲಾಗಿದೆ.

ಕ್ರಿಮಿಕೀಟ ಮತ್ತು ರೋಗಾದಿ ಉಪದ್ರವಗಳು : ದಾಳಿಂಬೆಗೆ ರೋಗಾದಿ ಉಪದ್ರವಗಳು ಅಷ್ಟಾಗಿ ಇರುವುದಿಲ್ಲ. ಆದರೆ ಕ್ರಿಮಿಕೀಟಗಳಿಂದ, ಅಳಿಲು ಮತ್ತು ಕೋತಿ ಮುಂತಾದವುಗಳಿಂದ ಹೆಚ್ಚು ನಷ್ಟವಾಗುತ್ತದೆ. ಕೀಟಗಳಲ್ಲಿ ಬಹಳ ಮುಖ್ಯವಾದ್ದು ಹಣ್ಣು ಕೊರೆಯುವ ಹುಳ (ಫ್ರೂಟ್ ಬೋರರ್). ಇದಕ್ಕೆ ದಾಳಿಂಬೆ ಕಂಬಳಿ ಹುಳು ಎಂದು ಹೆಸರೂ ಉಂಟು. ಇದರ ಶಾಸ್ತ್ರೀಯ ಹೆಸರು ವಿರಚೋಲ ಐಸೊಕ್ರೇಟಿಸ್, ಹುಳುಗಳು ಕಾಯಿಗಳನ್ನು ಕೊರೆದು ಹೆಚ್ಚು ನಷ್ಟವನ್ನುಂಟುಮಾಡುತ್ತವೆ. ಇವುಗಳ ಪ್ರೌಢಪತಂಗಗಳು ಮೊಗ್ಗುಗಳ ಮೇಲೆ ಮೊಟ್ಟೆಗಳನ್ನು ಇಡುವುವು. ಮೊಟ್ಟೆಗಳು ಒಡೆದು ಬಂದ ಹುಳುಗಳು ಕಾಯಿಗಳನ್ನೂ ಹಣ್ಣುಗಳನ್ನೂ ಕೊರೆಯುತ್ತವೆ. ಇದನ್ನು ತಡೆಯುವುದು ಸುಲಭವಲ್ಲ. ಗಿಡಗಳು ಹೂ ಬಿಟ್ಟ ಕೂಡಲೇ 50% ಡಿ.ಡಿ.ಟಿ.ಯನ್ನು 16 ಗ್ಯಾಲನ್ ನೀರಿನಲ್ಲಿ 20 ದಿನಕ್ಕೊಂದಾವರ್ತಿ ಸಿಂಪಡಿಸುವುದರ ಮೂಲಕ ಇದನ್ನು ತಡೆಯಬಹುದು. ಹೂ ಮತ್ತು ಕಾಯಿಗಳಿಗೆ ಮಸ್ಲಿನ್ ಬಟ್ಟೆಯ ಚೀಲವನ್ನು ಕಟ್ಟಿ ಪತಂಗ ಮೊಟ್ಟೆ ಇಡದಂತೆ ತಡೆಯಬಹುದು. 

ಮಳೆಗಾಲದಲ್ಲಿ ಕಾಯಿಗಳು ಕೊಳೆಯುವ ಅವಕಾಶವಿದೆ. ಹಣ್ಣಿನ ಯಾವುದಾದರೂ ಭಾಗದಲ್ಲಿ ಕೊಳೆತ ಕಾಣಿಸಿಕೊಂಡು ಕ್ರಮೇಣ ಎಲ್ಲ ಭಾಗಕ್ಕೂ ಹರಡುತ್ತದೆ. ಬೋರ್ಡೊ ದ್ರಾವಣವನ್ನು ಸಿಂಪಡಿಸುವುದರಿಂದ ಇದನ್ನು ಹತೋಟಿಗೆ ತರಬಹುದು.
ಪಂಜಾಬಿನಲ್ಲಿ ಫಂಗೈ ಗುಂಪಿಗೆ ಸೇರಿದ ಪ್ಲೂರೊಪ್ಲಕೊನೀಮ ಪ್ಯೂನಿಕೀ ಮತ್ತು ಆಸ್ಪರ್‍ಜಿಲಸ್ ಕಾಸ್ಟನಿಯಸ್ ಎಂಬ ಶಿಲೀಂಧ್ರಗಳಿಂದ ಹಣ್ಣು ಮತ್ತು ಬೀಜಗಳ ಬಣ್ಣ ಕೆಡುವುದುಂಟು. ಕರ್ನಾಟಕದಲ್ಲಿ ಸ್ಫಸಿಲೊಮ ಪ್ಯೂನಕೀ ಎಂಬ ಶಿಲೀಂದ್ರ ಹಣ್ಣಿನ ಆಕಾರವಿಕೃತಿಯನ್ನುಂಟುಮಾಡುತ್ತದೆ. ಪೋಮಾಪ್ಸಸ್ ಎಂಬುದರಿಂದ ಬುಲಂದಷಹರ್ ಜಿಲ್ಲೆಯಲ್ಲಿ (ಉತ್ತರ ಪ್ರದೇಶ) ಹಣ್ಣುಗಳು ಕೊಳೆಯುವ ರೋಗ ಉಂಟಾಗುತ್ತದೆ. ಪೆರೊನಾಕ್ಸನ್ನು ಆಲ್ಬಲಿನಿಯಮ್‍ನೊಂದಿಗೆ ಸೇರಿಸಿ ಸಿಂಪಡಿಸಿದರೆ ಈ ರೋಗವನ್ನು ತಡೆಯಬಹದು. 

ಸರ್ಕೊಸ್ಪೊರ ಮತ್ತು ಗ್ಲಿಯೊಸ್ಟೀರಿಯಂ ಶಿಲೀಂಧ್ರಗಳಿಂದಾಗಿ ಎಲೆ ಮತ್ತು ಹಣ್ಣುಗಳಲ್ಲಿ ಚುಕ್ಕೆಗಳು ಮೂಡುವವು. ಬೋರ್ಡೊ ಮಿಶ್ರಣವನ್ನು ಹಾಕುವುದರಿಂದ ಇದನ್ನು ನಿಲ್ಲಿಸಬಹುದು. 

ದಾಳಿಂಬೆಗೆ ಕಾಂಡಕೊರಕ ಹುಳುವಿನ (ಸ್ಪೆಮ್ ಬೋರರ್) ಪೀಡೆಯೂ ಉಂಟು. ಪೆಟ್ರೋಲಿನಲ್ಲಿ ಅದ್ದಿದ್ದ ಹತ್ತಿಯನ್ನು ರಂಧ್ರದೊಳಕ್ಕೆ ಹಾಕುವುದರಿಂದ ಹುಳುಗಳು ಸಾಯುವಂತೆ ಮಾಡಿ ಇದನ್ನು ತಡೆಗಟ್ಟಬಹುದು. 

ದಾಳಿಂಬೆಯನ್ನು ಹಲವಾರು ಬಗೆಗಳಲ್ಲಿ ಬಳಸಲಾಗುತ್ತದೆ. ಇದನ್ನು ಹಾಗೆಯೇ ತಿನ್ನುವುದೇ ಮುಖ್ಯ ರೀತಿಯ ಬಳಕೆಯಾದರೂ ಇದರಿಂದ ರಸವನ್ನು ತೆಗೆದು ಶರಬತ್ತಾಗಿ ಬಳಸುವುದೂ ಇದೆ. ಚೆನ್ನಾಗಿ ಮಾಗಿರುವ ಹಣ್ಣುಗಳನ್ನು ಆಯ್ದು, ಹೋಳುಗಳಾಗಿ ಕತ್ತರಿಸಿ, ಹೈಡ್ರಾಲಿಕ್ ಯಂತ್ರದ ಸಹಾಯದಿಂದ ಒತ್ತಡಕ್ಕೊಳಪಡಿಸಿ ರಸವನ್ನು ಹೊರತೆಗೆಯಲಾಗುತ್ತದೆ. 1 ಟನ್ ಹಣ್ಣಿನಿಂದ ಸುಮಾರು 360-450 ಲೀಟರ್ ರಸವನ್ನು ಪಡೆಯಬಹುದು. ಕೆಲವು ಸಲ ಬೀಜಗಳನ್ನು ಬಿಡಿಸಿಕೊಂಡು ಇಲ್ಲವೆ ಹಣ್ಣನ್ನು ಇಡಿಯಾಗಿಯೇ ಒತ್ತಡಕ್ಕೆ ಒಳಪಡಿಸಿ ರಸವನ್ನು ಪಡೆಯವುದು ಉಂಟು. ಜಿಲಾಟಿನ್ ದ್ರಾವಣವನ್ನು ಸೇರಿಸುವುದರ ಮೂಲಕ. ಸಿಪ್ಪೆಯಲ್ಲಿದ್ದು ಅನಂತರ ಒತ್ತಡಕ್ಕೊಳಪಟ್ಟಾಗ ರಸದಲ್ಲಿ ಸೇರುವ ಟ್ಯಾನಿನ್ ಅಂಶವನ್ನು ತೆಗೆದುಹಾಕಲಾಗುತ್ತದೆ. ಅನಂತರ ರಸವನ್ನು ಸೋಸಿ, 79-82 ಅ. ಗೆ ಕಾಯಿಸುವುದರ ಮೂಲಕ ಪಾಸ್ಪುರೀಕರಣಕ್ಕೆ ಒಳಪಡಿಸಿ ಸೋಡಿಯಮ್ ಬೆಂಜೊಯೆಟ್ ಸೇರಿಸಿ ರಸವನ್ನು ಸಂಗ್ರಹಿಸಿಡಲಾಗುತ್ತದೆ. ದಾಳಿಂಬೆಯ ರಸಕ್ಕೆ ಊದಾಮಿಶ್ರಿತ ಕೆಂಪು ಬಣ್ಣ ಹುಳಿಮಿಶ್ರಿತ ಸಿಹಿ ರುಚಿ ಉಂಟು. ಇದರಲ್ಲಿ ಸಿಟ್ರಿಕ್ ಮತ್ತು ಕೊಂಚ ಪರಿಮಾಣದಲ್ಲಿ ಮ್ಯಾಲಿಕ್ ಆಮ್ಲಗಳೂ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಸಕ್ಕರೆಗಳೂ ಇವೆ. ಅಲ್ಲದೆ ಸ್ವಲ್ಪ ಟ್ಯಾನಿನ್ ಅಂಶವೂ ಆಸ್ಫಾರ್ಟಿಕ್ ಆಮ್ಲ ಮತ್ತು ಗ್ಲುಟಮೈನ್ ಎಂಬ ಅಮೈನೋ ಆಮ್ಲಗಳೂ ಉಂಟು. ದಾಳಿಂಬೆಯ ರಸವನ್ನು ನೇರವಾಗಿ ಇಲ್ಲವೆ ಬೇರೆ ರಸಗಳೊಂದಿಗೆ ಮಿಶ್ರಮಾಡಿ ಪಾನೀಯವಾಗಿ ಬಳಸಬಹುದು. ರಸದಿಂದ ಅನಾರ್ ರಬ್ ಎಂಬ ಪಾಕವನ್ನೂ (ಸಿರಪ್) ಮಾಡುವುದಿದೆ.

ದಾಳಿಂಬೆಯ ಕಾಂಡದ ತೊಗಟೆ, ಬೇರಿನ ತೊಗಟೆ, ಎಲೆ ಹಾಗೂ ಹಣ್ಣಿನ ಸಿಪ್ಪೆಗಳಲ್ಲಿ ಅಧಿಕ ಮೊತ್ತದ ಟ್ಯಾನಿನ್ ಉಂಟು. ಇದರಿಂದಾಗಿ ಇವನ್ನು ಚರ್ಮ ಹದ ಮಾಡಲು, ಕಾಶ್ಮೀರ ಮತ್ತು ಮೆಡಿಟರೇನಿಯನ್ ದೇಶಗಳಲ್ಲಿ ಬಳಸಲಾಗುತ್ತದೆ. ಹಣ್ಣಿನ ಸಿಪ್ಪೆಯಿಂದ ಹಳದಿಮಿಶ್ರಿತ ಕಂದು ಅಥವಾ ಕಾಕಿ ಬಣ್ಣವನ್ನು ತಯಾರಿಸುವುದಿದೆ. ಉಣ್ಣೆ ಮತ್ತು ರೇಷ್ಮೆ ಬಟ್ಟೆಗಳಿಗೆ ಬಣ್ಣಕೊಡಲು ಇದನ್ನು ಬಳಸಲಾಗುತ್ತದೆ.

ದಾಳಿಂಬೆಗೆ ಔಷಧೀಯ ಗುಣಗಳೂ ಉಂಟು. ದಾಳಿಂಬೆ ಹಣ್ಣಿನ ರಸವಂತೂ ಉತ್ತಮ ತಂಪುಕಾರಕ. ಆಮಶಂಕೆ ಹಾಗೂ ಅತಿಸಾರಗಳ ಚಿಕಿತ್ಸೆಗಳಲ್ಲಿ ಇದನ್ನು ಉಪಯೋಗಿಸಲಾಗುತ್ತದೆ. ಕಾಂಡ ಮತ್ತು ಬೇರುಗಳ ತೊಗಟೆಯನ್ನು ಒಣಗಿಸಿ ಲಾಡಿ ಹುಳುಗಳ ನಿವಾರಣೆಯಲ್ಲಿ ಬಳಸುವ ಕ್ರಮ ಉಂಟು. ತೊಗಟೆಯಲ್ಲಿರುವ ಎಸೊಪೆಲೆಟೀರೀನ್ ಎಂಬ ಸಸ್ಯಕ್ಷಾರದಿಂದಾಗಿ ಈ ಗುಣ ಬಂದಿದೆ ಎಂದು ಹೇಳಲಾಗಿದೆ.

ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮುಂತಾದೆಡೆಗಳಲ್ಲಿ ಬೆಳೆಯುವ ಕಾಡು ದಾಳಿಂಬೆಯ ಬೀಜಗಳನ್ನು ಮಸಾಲೆ ವಸ್ತುವಾಗಿ ಬಳಸುವರು. ಇವಕ್ಕೆ ಅನಾರ್‍ದಾನ ಎಂಬ ವಾಣಿಜ್ಯ ನಾಮವುಂಟು.
(ಎನ್.ಎಸ್.ಐ.; ಎಚ್.ಎನ್.ಸಿ.)